ಮನಸ್ಸಿನ ಏಕಾಗ್ರತೆಗೆ ವೇದಮಂತ್ರ ಸಹಕಾರಿ – ಡಾ| ವಿದ್ಯಾ ಗೌತಮ ಕುಳಮರ್ವ

ಪೆರಡಾಲ ವಸಂತವೇದಪಾಠ ಸಮಾರೋಪ
ಪೆರಡಾಲ, 25-05-2016:
ವೈದಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಹಲವಾರು ಸಂವತ್ಸರಗಳಿಂದ ನಡೆದುಬರುತ್ತಿರುವ ಈ ಪಾಠಶಾಲೆಯು ಸಮಾಜಕ್ಕೆ ತುಂಬಾ ಉಪಕಾರಿಯಾಗಿದೆ. ಅಂತರ್ ದೃಷ್ಟಿಯನ್ನು ತೆರೆಯಲು ಮನಸ್ಸಿನ ಏಕಾಗ್ರತೆಗೆ ವೇದಮಂತ್ರ ಸಹಕಾರಿ  ಎಂದು ಡಾ| ವಿದ್ಯಾ ಗೌತಮ ಕುಳಮರ್ವ ನುಡಿದರು.

ಅವರು ಬುಧವಾರ ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾ ಇದರ ವತಿಯಿಂದ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಅನೇಕ ವರ್ಷಗಳಿಂದ ನಡೆದುಬರುತ್ತಿರುವ ವಸಂತ ವೇದಪಾಠಶಾಲೆಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ನಿವೃತ್ತ ಅಧ್ಯಾಪಕ ಕಾನ ಈಶ್ವರ ಭಟ್ ಮಾತನಾಡಿ ಇಲ್ಲಿ ಕಲಿತ ವಿದ್ಯೆಯನ್ನು ನಿಮ್ಮ ಮುಂದಿನ ಜೀವನದಲ್ಲಿ ಉಪಯೋಗಿಸಿ ಎಂದು ಮಕ್ಕಳಿಕೆ ಹಿತನುಡಿಗಳನ್ನು ಹೇಳಿದರು.

ಬೀಜದಲ್ಲಿ ಹೇಗೆ ಇಡೀ ವೃಕ್ಷದ ಶಕ್ತಿಯು ನಿಕ್ಷಿಪ್ತವಾಗಿದೆಯೋ ಹಾಗೆಯೇ ವೇದಮಂತ್ರಗಳಲ್ಲಿ ಎಲ್ಲಾ ದೇವತೆಗಳ ಶಕ್ತಿಯು ಅಡಗಿದೆ. ಅದನ್ನು ಕಲಿತು ಅನುಷ್ಠಾನಿಸಿ ಅನುಗ್ರಹ ಪಡೆದು ಭಾರತದ ಶ್ರೇಷ್ಠತೆಯನ್ನು ಸಾರುವವರಾಗಿ ಕೀರ್ತಿಗಳಿಸಿರಿ ಎಂದು ಸಭಾಧ್ಯಕ್ಷ ಕುಳಮರ್ವ ಶಂಕರನಾರಾಯಣ ಭಟ್ಟ ತಮ್ಮ ಭಾಷಣದಲ್ಲಿ ತಿಳಿಸಿದರು.

ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ತಿಳಿಸಿದರು. ಮೂರೂ ತರಗತಿಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಾದ ಕೃಪಾನಿಧಿ, ಮುಕುಂದ, ಆದಿತ್ಯ ಇವರುಗಳನ್ನು ಶಾಲು ಹೊದೆಸಿ ಆಶೀರ್ವದಿಸಲಾಯಿತು.

ಪಟ್ಟಾಜೆ ವೆಂಕಟೇಶ್ವರ ಭಟ್ಟ ವರದಿವಾಚನ ಮಾಡಿದರು. ಡಾ| ಸರವು ಸದಾಶಿವ ಭಟ್ಟ ಕಾರ್ಯಕ್ರಮ ನಿರೂಪಿಸಿದರು. ಮುರಲೀಧರ ಶರ್ಮ ಅಳಕ್ಕೆ ಸ್ವಾಗತಿಸಿ, ಶ್ರೀವತ್ಸ ಭಟ್ಟ ಎತ್ತುಕಲ್ಲು ಧನ್ಯವಾದವನ್ನಿತ್ತರು.

2 ತಿಂಗಳ ರಜೆಯಲ್ಲಿ ನಡೆದು ಬರುತ್ತಿರುವ ವಸಂತ ವೇದ ಶಿಬಿರದಲ್ಲಿ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ 100ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಧ್ಯಾಪಕರಾಗಿ ಪಟ್ಟಾಜೆ ವೆಂಕಟೇಶ್ವರ ಭಟ್, ಮಹಾಗಣಪತಿ ಅಳಕ್ಕೆ, ಶ್ರೀವತ್ಸ ಎತ್ತುಕಲ್ಲು ಹಾಗೂ ಸಂಸ್ಕøತ ಅಧ್ಯಾಪಕರಾಗಿ ಡಾ| ಸರವು ಸದಾಶಿವ ಭಟ್ ಸಹಕರಿಸಿದರು.

Perdala Vedapata Samaropa 25-5-2016 1

Perdala Vedapata Samaropa 25-5-2016 2