ವೇದಾಧ್ಯಯನದಿಂದ ಮಾನಸಿಕ ನೆಮ್ಮದಿ: ಪೆರಡಾಲದಲ್ಲಿ ವಸಂತ ವೇದ ಶಿಬಿರ ಆರಂಭ

ಪೆರಡಾಲ, 5 ಏಪ್ರಿಲ್ 2016:
ನಮ್ಮೊಳಗಿನ ದೇವರನ್ನು ನಾವು ಕಂಡುಕೊಳ್ಳಲು ಬೇಕಾದ ಶಕ್ತಿ ವೇದಾಧ್ಯಯನದಿಂದ ನಮಗೆ ಲಭಿಸುತ್ತದೆ. ಗುರುಹಿರಿಯರು ನಡೆಸಿಕೊಂಡು ಬಂದ ಪೂಜೆ ಪುನಸ್ಕಾರಾದಿಗಳನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮಗಿದೆ. ವೇದಾಧ್ಯಯನದಿಂದ ಮಾನಸಿಕ ನೆಮ್ಮದಿ ಕೂಡಾ ಲಭಿಸುತ್ತದೆ ಎಂದು ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾ, ಪೆರಡಾಲದ ಅಧ್ಯಕ್ಷ ಕುಳಮರ್ವ ಶಂಕರನಾರಾಯಣ ಭಟ್ ಅಭಿಪ್ರಾಯಪಟ್ಟರು.
ಅವರು ಮಂಗಳವಾರ ಬೆಳಗ್ಗೆ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾ ನಡೆಸಿಕೊಂಡುಬರುತ್ತಿರುವ ವಸಂತ ವೇದ ಪಾಠ ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳ ಹೆತ್ತವರಲ್ಲೋರ್ವರಾದ ಎಡೆಪ್ಪಾಡಿ ಮಹಾಲಿಂಗೇಶ್ವರ ಭಟ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪೆರಡಾಲ ದೇವಸ್ಥಾನದ ಪ್ರಧಾನ ಅರ್ಚಕ ಹಾಗೂ ವೇದ ಅಧ್ಯಾಪಕ ಶಿವರಾಮ ಭಟ್ ಶುಭಾಶಂಸನೆಗೈದರು.
ಅಧ್ಯಾಪಕ ವೇದಮೂರ್ತಿ ವೆಂಕಟೇಶ್ವರ ಭಟ್ ಪಟ್ಟಾಜೆ ಮಾತನಾಡಿ ನಮ್ಮ ಕುಲಗುರುಗಳಾದ ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಅನುಗ್ರಹದಿಂದ 1958 ಇಸವಿಯಿಂದಲೇ ಇಲ್ಲಿ ವೇದಪಾಠವು ನಡೆದುಕೊಂಡು ಬರುತ್ತಿದೆ. ವಿದ್ಯಾರ್ಥಿಗಳು ಹಾಗೂ ಹೆತ್ತವರು ಆಸಕ್ತಿಯಿಂದ ವಿದ್ಯಾರ್ಜನೆಗೆ ಬರುತ್ತಿರುವುದು ಸಂತಸ ತರುತ್ತಿದೆ ಎಂದು ಹೇಳಿದರು.
ಸಾಮೂಹಿಕ ಗುರುವಂದನೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಸಂಸ್ಕೃತ ಅಧ್ಯಾಪಕ ಸದಾಶಿವ ಭಟ್ ಸರವು ಸ್ವಾಗತಿಸಿದರು. ಕಾರ್ಯದರ್ಶಿ ಪ್ರಸಾದ ಮೈರ್ಕಳ ಧನ್ಯವಾದವನ್ನಿತ್ತರು. ವೇದ ಅಧ್ಯಾಪಕರಾದ ಮಹಾಗಣಪತಿ ಅಳಕ್ಕೆ, ಶ್ರೀವತ್ಸ ಎತ್ತುಗಲ್ಲು, ಪೆರಡಾಲ ಕ್ಷೇತ್ರದ ಆಡಳಿತ ಮಂಡಳಿಯ ಶಿವರಾಮ ಪೆರ್ಮುಖ, ವಲಯ ಅಧ್ಯಕ್ಷ ಶ್ರೀಹರಿ, ಪ್ರಸಾರ ವಿಭಾಗದ ಮುರಳಿ ಪಟ್ಟಾಜೆ, ಬಾಲಸುಬ್ರಹ್ಮಣ್ಯ ಮಾತೃಪ್ಪಾಡಿ ಹಾಗೂ ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಸುಮಾರು 95 ವಿದ್ಯಾರ್ಥಿಗಳು ಹಾಜರಿದ್ದರು.
2 ತಿಂಗಳ ಬೇಸಿಗೆ ರಜಾ ಕಾಲದಲ್ಲಿ ನಡೆದು ಬರುತ್ತಿರುವ ವಸಂತ ವೇದಪಾಠಶಾಲೆಯು 1958 ಇಸವಿಯಲ್ಲಿ ಪ್ರಾರಂಭಗೊಂಡಿತ್ತು.

Vasantha Veda Shibira Perdala 5-4-2016 1

Vasantha Veda Shibira Perdala 5-4-2016 2

Vasantha Veda Shibira Perdala 5-4-2016 3

Vasantha Veda Shibira Perdala 5-4-2016 4

Vasantha Veda Shibira Perdala 5-4-2016 5